ರೂಬನ್ಸ್, ಪೀಟರ್ ಪಾಲ್
1577-1640. ಪುನರುಜ್ಜೀವನ ಕಾಲದ (ರೆನೆಸಾನ್ಸ್) ಪ್ಲೆಮಿಷ್ ಸಂಪ್ರದಾಯದ ಶ್ರೇಷ್ಠ ವರ್ಣಚಿತ್ರಕಾರ. 28 ಜೂನ್ 1577ರಲ್ಲಿ ವೆಸ್ಟಫೇಲಿಯದ ಸಿಯೋಗೆನ್‍ನಲ್ಲಿ ಹುಟ್ಟಿದ. 1587ರಲ್ಲಿ ತಂದೆ ಮರಣಹೊಂದಿದ ಬಳಿಕ ತಾಯಿಯೊಂದಿಗೆ ಆ್ಯಂಟ್‍ವರ್ಪ್‍ಗೆ ಹಿಂದಿರುಗಿದ. ಈ ಹೊತ್ತಿಗೆ ಕುಟುಂಬದವರೆಲ್ಲ ರೋಮನ್ ಕ್ಯಾಥೊಲಿಕರಾಗಿ ಪರಿವರ್ತನೆ ಹೊಂದಿದ್ದರು. ಟೊ ಬಯ್ಯಾಸ್ ವರ್‍ಹ್ಯಾಚ್ಟ್ ಎಂಬ ಸ್ಟುಡಿಯೊದಲ್ಲಿ ಸ್ವಲ್ಪಕಾಲ ಕೆಲಸಮಾಡಿ, ಅದನ್ನು ಬಿಟ್ಟು ಅಟ್ಟೋವಾನ್ ವೀನ್‍ನ ಕೈಕೆಳಗೆ ಕೆಲಸ ಮಾಡಿದ. ಅನಂತರ ಈತ 1598ರಲ್ಲಿ ಆ್ಯಂಟ್‍ವರ್ಪ್‍ನ ಗಿಲ್ಡ್‍ಗಳನ್ನು ಸೇರಿದ. 1600 ರಲ್ಲಿ ಇಟಲಿಗೆ ಒಂದು ಡ್ಯುಕ್ ಆಫ್ ಮಾಂಟುವಾ ಬಳಿ ಕಾರ್ಯನಿರ್ವಹಿಸತೊ ಡಗಿದ. ಈ ಅವಧಿಯಲ್ಲಿ ಇಟಲಿಯ ಪುನರುಜ್ಜೀವನ ಕಲೆಯ ಗಾಢಪ್ರಭಾವಕ್ಕೆ ಒಳಗಾದ. ಮಾಂಟುವದಲ್ಲಿದ್ದಾಗ ಪೆರುಗಿನೊ, ಕೋಸ್ಟಾ, ಮ್ಯಾಂಟೆಗ್ನಾ, ಗ್ಯಲಿಯೊರೊಮಾನಾ ಮೊದಲಾದ ವರ್ಣಚಿತ್ರಕಾರರ ಕಲಾಕೃತಿಗಳನ್ನು ಅಧ್ಯಯನ ಮಾಡಿದ. 16ನೆಯ ಶತಮಾನದ ಕೊನೆಯ ಭಾಗದ ವೆನಿಷಿಯನ್ ಕಲೆಗಾರರ ವರ್ಣಚಿತ್ರಗಳನ್ನೂ ಅಧ್ಯಯನ ಮಾಡಿದ. ಪುರಾತನ ಕಲೆ ಇವನ ಜೀವನವಿಡೀ ತನ್ನ ಪ್ರಭಾವವನ್ನು ಬೀರಿತು, ಸ್ಫೂರ್ತಿ ನೀಡಿತು.

 ಮಾಂಟುವದಲ್ಲಿದ್ದಾಗ (1604-06) ಈತ ಜುಸೈಟ್ ಚರ್ಚ್‍ಗಾಗಿ ವರ್ಣಚಿತ್ರಗಳನ್ನು ರಚಿಸಿದ. ಈ ಕಾಲದ ಪ್ರಸಿದ್ಧ ವರ್ಣಚಿತ್ರಗಳೆಂದರೆ ಅಡೊರೇಶನ್ ಆಫ್ ದಿ ಟ್ರಿನಿಟಿ ಬೈ ದಿ ಗೊಂeóÁಗ ಫ್ಯಾಮಿಲಿ, ಮಡೋನ್ನ, ಅಡೋರ್ಡ್ ಬೈದಿ ಸೆಯಿಂಟ್ಸ್. ಅನಂತರ 1608ರಲ್ಲಿ ಆ್ಯಂಟ್‍ವರ್ಡ್‍ಗೆ ಹಿಂದಿರುಗಿದ. ಅಲ್ಲಿನ ರಾಜ ಆರ್ಚ್‍ಡ್ಯೂಕ್ ಆಲ್ಬರ್ಟ್ ಮತ್ತು ಅವನ ಪತ್ನಿ ಇಸಬೆಲ್ಲಾರ ಆಸ್ಥಾನದ ಅಧಿಕೃತ ವರ್ಣಚಿತ್ರಕಾರನಾಗಿ ಕೆಲಸಮಾಡಿದ. ಈ ಸಂದರ್ಭದಲ್ಲಿ ಇಸಬೆಲ್ಲಾ ಬ್ರಾಟ್‍ಳನ್ನು ಮದುವೆಯಾದ. 1609-1614ರ ಅವಧಿಯಲ್ಲಿ ಚರ್ಚ್‍ಗಾಗಿ ಅಡೊರೇಶನ್ ಆಫ್ ದಿ ಕಿಂಗ್ಸ್, ರೈಸಿಂಗ್ ಆರ್ಫ್ ದಿ ಕ್ರಾಸ್, ಡಿಸೆಂಟ್ ಫ್ರಮ್ ದಿ ಕ್ರಾಸ್ ಎಂಬ ಮೂರು ಶ್ರೇಷ್ಠ ವರ್ಣಚಿತ್ರಗಳನ್ನು ರಚಿಸಿದ. ಈ ವರ್ಣಚಿತ್ರಗಳಲ್ಲಿ ಯಥಾರ್ಥ ನಿರೂಪಣಾ ಪದ್ಧತಿ (ನ್ಯಾಚುರಲಿಸಂ) ಮತ್ತು ಪುನರುತ್ಥಾನ ಪದ್ಧತಿಗಳೆರಡರ ಮಧ್ಯದ ಘರ್ಷಣೆಯನ್ನು ಕಾಣುತ್ತೇವೆ. ಧಾರ್ಮಿಕ ವಸ್ತುಗಳುಳ್ಳ ಚಿತ್ರಗಳ ಬೇಡಿಕೆ ಹೆಚ್ಚಾದ್ದರಿಂದ ಒಂದು ಸ್ಟುಡಿಯೊವನ್ನು ವ್ಯವಸ್ಥೆ ಮಾಡಬೇಕಾಯಿತು. ಸ್ಮಾರಕಗಳು ಮತ್ತು ಖಾಸಗಿ ಕ್ರೈಸ್ತರ ಆರಾಧನಾ ಮಂದಿರಗಳ ಅಂಕಣ ಫಲಕಗಳಿಗಾಗಿ ವರ್ಣಚಿತ್ರಗಳನ್ನು ನಿರ್ಮಾಣ ಮಾಡಬೇಕಾಯಿತು. ಮದೋನ್ನ ಅಂಡ್ ದಿ ಚೈಲ್ಡ್-ಹೀಗೆ ರಚನೆಗೊಂಡ ಒಂದು ವರ್ಣಚಿತ್ರ. 1614 ರಿಂದ 1618ರ ವರೆಗಿನ ಅವಧಿಯಲ್ಲಿ ರಚಿಸಿದ ವರ್ಣಚಿತ್ರಗಳಲ್ಲಿ ಹೆಚ್ಚಿನ ಕಲಾಪರಿಣತಿಯನ್ನು ಕಾಣುತ್ತೇವೆ. ವೀನಸ್, ಕ್ಯುಪಿಡ್ ಬ್ಯಾಖಸ್ ಅಂಡ್ ಸಿರಿಸ್ (1613), ಡಯಾನಾ ರಿಟರ್ನಿಂಗ್ ಫ್ರಮ್ ಚೇಸ್ (1615-17), ರೇಪ್ ಆಫ್ ದಿ ಡಾಟರ್ಸ್ ಆಫ್ ಲ್ಯೂಸಿಪಸ್ (1615-17)-ಈ ವರ್ಣಚಿತ್ರಗಳು ಈತನ ಚಿತ್ರಣ ಪ್ರತಿಭೆಗೆ ಸಾಕ್ಷಿಗಳಾಗಿವೆ.  ಅ್ಯಂಟ್‍ವರ್ಪ್‍ನ ಜುಸೈಟ್ ಚರ್ಚ್ ಆಫ್ ಸೆಯಿಂಟ್ ಚಾಲ್ರ್ಸ್‍ನಲ್ಲಿರುವ ಅಲಂಕರಣ ಚಿತ್ರಗಳು ಈತನ ಸಹಾಯಕರು ಮತ್ತು ವಿದ್ಯಾರ್ಥಿಗಳು ಒಟ್ಟಿಗೆ ನಿರ್ಮಾಣ ಮಾಡಿದಂಥವು. 1718ರಲ್ಲಿ ಈ ಚರ್ಚ್ ನಾಶವಾಯಿತು. ಆದರೆ ರೂಬನ್ಸ್ ನಿರ್ಮಿಸಿದ ಸೆಯಿಂಟ್ ಇಗ್ನಾಷಿಯಸ್ ಮತ್ತು ಫ್ರಾನ್ಸಿಸ್ ಕ್ಸೇವಿಯರ್ಸ್ ಮಿರಾಕಲ್ಸ್ ಎಂಬ ಎರಡು ವರ್ಣಚಿತ್ರಗಳು ನಾಶವಾಗದೆ ಉಳಿದವು. ಇವು ಈಗ ವಿಯನ್ನಾದಲ್ಲಿವೆ. 1621ರಲ್ಲಿ  ಈತ ಹೊಸ ಅರಮನೆ ಮೇರಿ ಡಿ ಮೆಡಿಸಿಗಾಗಿ ಅಲಂಕರಣ ವರ್ಣಚಿತ್ರಗಳನ್ನು ನಿರ್ಮಿಸಿದ. ಈ ವರ್ಣಚಿತ್ರಗಳು ಮೇರಿಯ ಜೀವನವನ್ನು ಆಧರಿಸಿವೆ. ಶಕ್ತಿಯುತವಾದ ವರ್ಣಸಂಯೋಜನೆಯನ್ನು ಅರ್ಥಪೂರ್ಣವಾಗಿ ಬಳಸಿಕೊಳ್ಳುವ ಈ ವರ್ಣಚಿತ್ರಗಳು ಈತನ ಶ್ರೇಷ್ಠ ಪ್ರತಿಭೆಗೆ ಉದಾಹರಣೆಗಳಾಗಿವೆ. ಇಲ್ಲಿ ಸಂಕೀರ್ಣ  ಅನ್ಯೋಕ್ತಿಯನ್ನು ಶ್ರದ್ಧೆಯಿಂದ ಚಿತ್ರಣ ಮಾಡಲಾಗಿದೆ. ದಿ ಲ್ಯಾಂಡಿಂಗ್ ಆಫ್ ದಿ ಕ್ವೀನ್ ಮದರ್ ಮತ್ತು ಅವಳ ಕಾರೋನೇಶನ್‍ಗಳು ಇವನ ಶ್ರೇಷ್ಠ ಅಸಮರೂಪ ಶೈಲಿಯ ಬರೋಕ್ ವರ್ಣಚಿತ್ರಗಳಾಗಿವೆ. ಉಳಿದ ಚಿತ್ರಗಳು ಭಾವಗೀತೆಯ ಚೆಲುವನ್ನು ಉಳ್ಳವಾಗಿವೆ. 

ಇವನ ಮೊದಲ ಪತ್ನಿ ಇಸಬೆಲ್ಲಾ ಬ್ರಾಂಟ್ 1626ರಲ್ಲಿ ತೀರಿಕೊಂಡಳು. ಅರ್ಚ್‍ಡಚೆಸ್‍ಳ ಪರವಾಗಿ  ಯುರೋಪಿನಲ್ಲಿ ಶಾಂತಿ ಸ್ಥಾಪಿಸಲು ಈತ ರಾಯಭಾರಿಯಾಗಿ ಕೆಲಸ ನಿರ್ವಹಿಸಿದ. ಇದರಿಂದ 1625ರಲ್ಲಿ ಪ್ಯಾರಿಸ್‍ನಲ್ಲಿ ಬಂಕಿಂಗ್‍ಹ್ಯಾಂ ಜೊತೆ ಸಂಪರ್ಕ ಬೆಳೆದು 1628ರಲ್ಲಿ ಸ್ಪೇಯಿನ್‍ಗೆ ಮತ್ತು 1629-30ರಲ್ಲಿ ಇಂಗ್ಲೆಂಡ್‍ಗೆ ಭೇಟಿನೀಡುವ ಅವಕಾಶ ಸಿಕ್ಕಿತು. ಒಂದನೆಯ ಚಾಲ್ರ್ಸ್ ಇವನಿಗೆ ನಿಕಟನಾಗಿ ಇವನಿಂದ ಸೆಯಿಂಟ್ ಜಾರ್ಜ್ ಮತ್ತು ಡ್ರ್ಯಾಗನ್ ಎಂಬ ವರ್ಣಚಿತ್ರ ರಚನೆಗೆ ಕಾರಣನಾದ.

ಅನಂತರ ಅಲಂಕರಣ ವರ್ಣಚಿತ್ರಗಳು ಇವನ ಸ್ಟುಡಿಯೋದಿಂದ ಪುಂಖಾನುಪುಂಖವಾಗಿ ನಿರ್ಮಾಣಗೊಂಡವು. ಇವುಗಳಲ್ಲಿ ಮುಖ್ಯವಾದ ವೆಂದರೆ ಕ್ರೈಸ್ಟ್ ಆನ್ ದಿ ಕ್ರಾಸ್, ದಿ ಮದೋನ್ನ ಅಡೋರ್ಡ್ ಬೈ ಸೆಯಿಂಟ್ಸ್. ಭಾವಚಿತ್ರ ನಿರ್ಮಾಣವನ್ನೂ ಈ ಕಾಲದಲ್ಲೇ ಈತ ಮಾಡಿದ. ಅವುಗಳಲ್ಲಿ ಮುಖ್ಯವಾದುವೆಂದರೆ ಎ ಸ್ಕಾಲರ್, ಸೆಲ್ಫ್  ಪೋಟ್ರೈಟ್ಸ್.

ಇವನ ಜೀವನದ ಅಂತ್ಯದಲ್ಲಿ ರಚನೆಗೊಂಡ ಚಿತ್ರಗಳಲ್ಲಿ ಜಡ್ಜ್‍ಮೆಂಟ್ ಆಫ್ ಪ್ಯಾರಿಸ್, ತ್ರೀ ಗ್ರೇಸಸ್, ಡಯಾನ ಅಂಡ್ ಕ್ಯಾಲಿಸ್ಟೋ, ದಿ ಅಬ್‍ಡಕ್ಷನ್ ಆಫ್ ದಿ ಡಾಟರ್ಸ್ ಆಫ್ ಲ್ಯೂಸಿಪಸ್-ಇವು ವರ್ಣಸಂಯೋಜನೆಯ ದೃಷ್ಟಿಯಿಂದ ಶ್ರೇಷ್ಠ ಕಲಾಕೃತಿಗಳಾಗಿವೆ. ಹುತಾತ್ಮರ ಚಿತ್ರಗಳಾದ ಕ್ರೂಸಿಫಿಕೇಷನ್ ಆಫ್ ಸೆಯಿಂಟ್ ಪೀಟರ್, ಕ್ರೈಸ್ಟ್ ಆನ್ ದಿ ಕ್ರಾಸ್ (1635-40)-ಇವು ಸಂತರ ಯಾತನೆ ಮತ್ತು ಆನಂದದ ಸಮ್ಮಿಳನದ ಭಾವವನ್ನು ಸಮರ್ಥವಾಗಿ ಚಿತ್ರಿಸುತ್ತವೆ.

1635ರಲ್ಲಿ ಅರ್ಚ್‍ಡಚೆಸ್‍ಳ ನಿಧನದ ಅನಂತರ ಈತ ಸಾರ್ವಜನಿಕ ಜೀವನದಿಂದ ನಿವೃತ್ತನಾಗಿ ತನ್ನ ಚಿಕ್ಕವಯಸ್ಸಿನ ಪತ್ನಿ ಹೆಲಿನಾ  ಫೋರ್‍ಮೆಂಟ್‍ಳೊಡನೆ ಸ್ಟೀನ್ ಎಸ್ಟೇಟ್‍ಗೆ ಬಂದು ನೆಲೆಸಿದ. ಇವನ ಅಂತಿಮಕಾಲದಲ್ಲಿ ಮುಖ್ಯವಾಗಿ ಭೂದೃಶ್ಯಗಳ ಚಿತ್ರಣದಲ್ಲಿ ವರ್ಣಚಿತ್ರ ಕಾರನಾಗಿ ಇವನ ಪ್ರಬುದ್ಧತೆ ಕಾಣುತ್ತದೆ. ಗಾರ್ಡ್‍ನ್ ಆಫ್ ಲವ್ ಚಿತ್ರಕ್ಕೆ ಇವನ ಹೆಂಡತಿ ಹೆಲಿನಾಳೇ ಸ್ಫೂರ್ತಿ. ಸ್ಟೀನ್ ಪ್ರದೇಶದ ಚಿತ್ರಣದಲ್ಲಿ ಪ್ರಕೃತಿಯಿಂದ ನೇರವಾಗಿ ಸ್ಫೂರ್ತಿ ಪಡೆದು ತಾಂತ್ರಿಕ ಪ್ರಬುದ್ಧತೆಯಿಂದ ಗ್ರಾಮಾಂತರದ ಪ್ರದೇಶಗಳ ಚಿತ್ರಣವನ್ನು ಉಜ್ವಲವಾಗಿ ಮಾಡಿದ. ದೈನಂದಿನ ಸರಳ ಜೀವನವನ್ನು ಈತ ಬಣ್ಣಗಳ ವಿಶಿಷ್ಟ ಸಂಯೋಜನೆಯೊಂದಿಗೆ ಅತ್ಯಂತ ಆಪ್ತವಾಗಿ ಚಿತ್ರಿಸಿದ್ದಾನೆ.

ಪ್ಲೆಮಿಷ್ ವರ್ಣಚಿತ್ರ ರಚನಾಪದ್ಧತಿಯನ್ನು ಊರ್ಜಿತಗೊಳಿಸಿದ  ಈತ ಇಟಲಿಯ ಪುನರುಜ್ಜೀವನ ಕಾಲದ ವರ್ಣಚಿತ್ರಕಾರರಿಂದ ಸ್ಫೂರ್ತಿಗೊಂಡರೂ ಬರೋಕ್ ಚಿತ್ರರಚನಾಪದ್ಧತಿಯ ಆಶಯಗಳನ್ನು ತನ್ನ ವರ್ಣಚಿತ್ರಗಳಲ್ಲಿ ಅಭಿವ್ಯಕ್ತಿಸಿ ಪ್ಲೆಮಿಷ್ ವೈಶಿಷ್ಟ್ಯವನ್ನೂ ಉಳಿಸಿ ಕೊಂಡ. ಈತ ಪುರಾತತ್ತ್ವ ಮತ್ತು ಅಭಿಜಾತ ಅಧ್ಯಯನಗಳಲ್ಲಿ ಆಸಕ್ತನಾಗಿದ್ದಂತೆ ಹ್ಯೂಮನಿಸ್ಟರ ಜೊತೆ ನಿಕಟ ಸಂಬಂಧ ಹೊಂದಿದ್ದ. ನಿಷ್ಠಾವಂತ ಕ್ಯಾಥೊಲಿಕ್ ಆಗಿದ್ದ ಈತ ಕ್ರಿಸ್ತಪೂರ್ವ ಸಂಸ್ಕøತಿಯ ಮತ್ತು ಕ್ರಿಶ್ಚಿಯನ್ ಸಂಸ್ಕøತಿಯ ಗುಣಶ್ರೇಷ್ಠತೆಗಳನ್ನು ತನ್ನ ವರ್ಣಚಿತ್ರಗಳಲ್ಲಿ ಸಾಂಗತ್ಯಗೊಳಿಸಿದ. ಸ್ಫುರದ್ರೂಪಿಯಾಗಿದ್ದ ಈತ ತನ್ನ ಆಶ್ರಯದಾತರ ನಂಬಿಕೆಗೆ ಅರ್ಹನಾಗಿ ಅವರ ಪರವಾಗಿ ರಾಯಭಾರದ ಜವಾಬ್ದಾರಿಯನ್ನೂ ಹಲವು ಬಾರಿ ನಿರ್ವಹಿಸಿದ. ಪ್ರವಾಸಿಗನಾಗಿ, ವರ್ಣಚಿತ್ರಗಳ ಸಂಗ್ರಾಹಕನಾಗಿ, ಕಲಾಭಿಜ್ಞನಾಗಿ ಮತ್ತು ಕಲಾವಿಮರ್ಶಕನಾಗಿ ಇವನ ಸ್ಥಾನ ಬಹಳ ದೊಡ್ಡದು. ಈತ ಅಸೀಮ ಚೈತನ್ಯವುಳ್ಳವನಾಗಿದ್ದ; ಸಂಯಮಿ. ಸಮಾಜದ ಮೇಲುಸ್ತರದ ವ್ಯಕ್ತಿಗಳೊಂದಿಗೆ ಸಹಜವಾಗಿ ಬೆರೆಯಬಲ್ಲವನಾಗಿದ್ದಂತೆಯೇ ತನ್ನ ಫ್ಲೆಮಿಷ್ ಸಾಮಾನ್ಯ ಜನರೊಂದಿಗೆ ಅಷ್ಟೇ ನಿಕಟಸಂಬಂಧ ಹೊಂದಿದವನಾಗಿದ್ದ. ಸ್ವದೇಶಪ್ರೇಮಿಯಾಗಿದ್ದೂ ತನ್ನ ದೇಶದ ಪರಿಮಿತಿಯಾಚೆ ನೋಡಬಲ್ಲವನಾಗಿದ್ದ. ಈತನ ವರ್ಣಚಿತ್ರಗಳಲ್ಲಿ ಬೃಹತ್ತೂ ಮಹತ್ತೂ ಇವೆ; ಹಾಗೆಯೇ ಸೂಕ್ಷ್ಮತೆ, ಶಕ್ತಿಯುತ ಕ್ರಿಯೆ, ಸಂವೇದನಾಶೀಲತೆ, ಭಾವಗೀತಾತ್ಮಕತೆಗಳೂ ಇವೆ. ಇವನು ಚಿತ್ರಿಸಿರುವ ಪ್ರಪಂಚ ಆರೋಗ್ಯಕರವಾದದ್ದು ಮತ್ತು ಸುಂದರವಾದದ್ದು. ಈತ 1640 ಮೇ 30 ರಂದು ಆ್ಯಂಟ್‍ವರ್ಪ್‍ನಲ್ಲಿ ನಿಧನಹೊಂದಿದ.	

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ